ಪಿತಲ್ಖೋರ -
 	ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಒಂದು ಪುರಾತತ್ವ ನೆಲೆ. ಔರಂಗಾಬಾದಿನಿಂದ ಸುಮಾರು 67 ಕಿ.ಮೀ. ಹಾಗೂ ಎಲ್ಲೋರದಿಂದ ಸುಮಾರು 7 ಕಿ.ಮೀ ದೂರದಲ್ಲಿದೆ. ಸತಮಲ ಅಥವಾ ಚಂದೋರ ಬೆಟ್ಟಗಳ ಸಾಲಿನಲ್ಲಿ ಆಳವಾದ ಕಮರಿಯೊಂದರ ಇಕ್ಕಟ್ಟಾದ ಎರಡೂ ಪಾಶ್ರ್ವಗಳಲ್ಲಿ ಪಿತಲ್ಖೋರದ ಬೌದ್ಧಗವಿಗಳು ಹರಡಿವೆ. ಬಲಪಾಶ್ರ್ವದಲ್ಲಿ (ಉತ್ತರ ಭಾಗ) ಒಂಬತ್ತು ಗವಿಗಳೂ (1 ರಿಂದ 9) ಎಡಪಾಶ್ರ್ವದಲ್ಲಿ (ದಕ್ಷಿಣ ಭಾಗ) ನಾಲ್ಕು ಗವಿಗಳೂ (10 ರಿಂದ13) ಇವೆ. 

 ಈ ಗವಿಗಳು ದುರ್ಗಮ ಪ್ರದೇಶದಲ್ಲಿರುವುದರಿಂದ ಹೆಚ್ಚು ಬೆಳಕಿಗೆ ಬಂದಿಲ್ಲ. ಇವುಗಳ ಕಾಲ ಕ್ರಿ.ಪೂ. 2 ಮತ್ತು 1 ನೆಯ ಶತಮಾನಗಳು. ಆಗ ಪ್ರತಿಷ್ಠಾನದಿಂದ (ಪೈಠಣ) ಆಳುತ್ತಿದ್ದ. ಸಾತವಾಹನರ ಅಧಿಕಾರಕ್ಕೆ ಈ ಪ್ರದೇಶ ಒಳಪಟ್ಟಿತ್ತು. ಗೋವರ್ಧನ (ನಾಸಿಕ ಪ್ರದೇಶ) ಮತ್ತು ಶೂರಪರಕ (ಸೊಪಾರಾ ಜಿಲ್ಲೆ, ಥಾನ) ದೇಶಗಳಿಂದ ಪ್ರತಿಷ್ಠಾನಕ್ಕೆ ಹೋಗುತ್ತಿದ್ದ ಸಾರ್ಥವಾಹ ಪಥದ ಮಧ್ಯದಲ್ಲಿದ್ದ ಪಿತಲ್ಖೋರವನ್ನು ಮಹಾ ಮಯೂರೀ ಎಂಬ ಬೌದ್ಧ ಗ್ರಂಥ ಪೀತಂಗಲ್ಯ ಎಂದೂ ಟಾಲೆಮಿಯ ಕೃತಿ ಪೆಟ್ರಿಗಲ ಎಂದು ಉಲ್ಲೇಖಿಸುತ್ತವೆ.

	ಪುರಾತತ್ವ ಕ್ಷೇತ್ರಕ್ಕೆ ಪಿತಲ್ಖೋರದ ಪರಿಚಯವಾದ್ದು ಸುಮಾರು ಒಂದು ಶತಮಾನದಿಂದ ಈಚೆಗೆ. 1853 ರಲ್ಲಿ ಜಾನ್ ವಿಲ್ಸನ್ ಎಂಬಾತ ಇಲ್ಲಿಯ ಚೈತ್ಯ ಮತ್ತು ವಿಹಾರ ಗವಿಗಳನ್ನು (ಈಗಿನಸಂಖ್ಯೆ 3 ಮತ್ತು 4) ಸಂಕ್ಷಿಪ್ತವಾಗಿಯೂ ಅನಂತರ ಫರ್ಗುಸನ್ ಹಾಗೂ ಬರ್ಜೆಸ್ (1880) ಅವರು ವಿಸ್ತøತವಾಗಿಯೂ ವಿವರಿಸಿದ್ದರು. ಈಚಿನ ವರ್ಷಗಳಲ್ಲಿ ಎಂ.ಜಿ. ದೀಕ್ಷಿತ್ ಇಲ್ಲಿಯ ಗವಿಗಳನ್ನು--ವಿಶೇಷವಾಗಿ ವಾಸ್ತು ರೂಪಗಳ ವಿಶ್ಲೇಷಣೆಗೆ ಪ್ರಾಮುಖ್ಯ ನೀಡಿ-ವಿವರಿಸಿದರು. ಇವರು ಹೊಸದಾಗಿ ಎರಡು ಗವಿಗಳನ್ನು (10 ಮತ್ತು 11) ಪತ್ತೆ ಹಚ್ಚಿದರು. 1953 ರಲ್ಲಿ ಭಾರತ ಸರ್ಕಾರದ ಪುರಾತತ್ವ ಇಲಾಖೆ ಈ ಗವಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಈಗ ಇವು ಅದಕ್ಕೆ ಒಳಪಟ್ಟಿವೆ. 

	ಇಲ್ಲಿಯ ಗವಿಗಳಲ್ಲಿ 1, 2, 4, 5, 6, 7, 8, 9, ಹಾಗೂ 11 ನೆಯವು ವಿಹಾರಗಳಾದರೆ, 3, 10, 12, ಮತ್ತು 13 ನೆಯವು ಚೈತ್ಯ ಗವಿಗಳು. ಪಿತಲ್ಖೋರ ಬೌದ್ಧ ಥೇರವಾದಿಗಳ (ಸ್ಥವಿರವಾದ) ಒಂದು ಕೇಂದ್ರವಾಗಿತ್ತು. ಇಲ್ಲಿಯ ಚೈತ್ಯ ಸಭಾಂಗಣಗಳು ಭಾಜಾ ಮತ್ತು ಕೊಂಡಾನೆಗಳಲ್ಲಿಯವುಗಳನ್ನು ಹೋಲುತ್ತವೆ. ಕೆಲವು ಗವಿಗಳಲ್ಲಿ ಕ್ರಿ.ಪೂ. 2-1 ನೆಯ ಶತಮಾನಗಳಿಗೆ ಸೇರಿದ ಕೆಲವು ಶಾಸನಗಳಿವೆ. 3 ನೆಯ ಗವಿಯ ಕೆಲವು ಸ್ತಂಭಗಳ ಮೇಲೆ ಕ್ರಿ..ಶ. 6 ನೆಯ ಶತಮಾನಕ್ಕೆ ಸೇರಿದ, ಬುದ್ಧ ಮತ್ತು ಬೋಧಿಸತ್ವರಿಗೆ ಸಂಬಂಧಿಸಿದ, ವರ್ಣಚಿತ್ರಗಳಿಗೆ ಪಿತಲ್ಖೋರದ ಶಿಲ್ಪಕೃತಿಗಳು ಹೀನಾಯಾನ ಪಂಥಕ್ಕೆ ಸೇರಿದವು. ವರ್ಣಚಿತ್ರಗಳು ಮಹಾಯನ ಪಂಥದವು. ಇಲ್ಲಿಯ ಸ್ತೂಪದಲ್ಲಿ ಹರಳಿನ ಧಾತುಗರ್ಭ ದೊರೆತಿದೆ. 4 ನೆಯ ಗವಿಯ ಚಾವಣಿಯ ಮೇಲೆ ಬಿದ್ದ ನೀರು ಒಳ ಸೇರಿ ಪ್ರವೇಶದ್ವಾರದ ಬಳಿಯಲ್ಲಿ ಹೊರಗಡೆ ಹೋಗುವಂತೆ ಮಾಡಿದ್ದ ವ್ಯವಸ್ಥೆ ಗಮನಾರ್ಹವಾದ್ದು. ಇದೇ ಗವಿಯಲ್ಲಿರುವ ದ್ವಾರಪಾಲ, ಅಶ್ವ ಮತ್ತು ಪುರುಷ, ಚೌರಿಧಾರಿ ಶಿಲ್ಪಕೃತಿಗಳು ಮನೋಹರವಾಗಿವೆ. ದ್ವಾರಪಾಲಿಕ ಮೂರ್ತಿಗಳ ವೇಷಭೂಷಣಗಳಲ್ಲಿ ಗಾಂಧಾರ ಶಿಲ್ಪ ಶೈಲಿಯ ಪ್ರಭಾವ ಕಂಡುಬರುತ್ತದೆ. 

	ಇಲ್ಲಿಯ ಗವಿಗಳು ಮಣ್ಣು ಮತ್ತು ಕಸದಿಂದ ತುಂಬಿ ಹೋಗಿದ್ದವು. ಅವನ್ನು ಸ್ವಚ್ಚಗೊಳಿಸುವಾಗ ಹಲವಾರು ಬಿಡಿಶಿಲ್ಪಗಳು ದೊರೆತವು. ಇವುಗಳ ಪೈಕಿ ಗಜಲಕ್ಷ್ಮಿ, ಸಿದ್ಧಾರ್ಥ ತನ್ನ ಅರಮನೆಯಿಂದ ಪ್ರಯಾಣ ಮಾಡುತ್ತಿರುವುದು, ಯಕ್ಷ ಯಕ್ಷಿಯರು, ಕರಂಡಿಧಾರಿಣಿ ಯಕ್ಷಿ, ದ್ವಾರಪಾಲಕ, ಕಿನ್ನರ ಗಂಧರ್ವರು, ಸಂಗೀತಗಾರರು, ಮಾವುತರು ಮತ್ತು ರಾಜ ದಂಪತಿಗಳ ಶಿಲ್ಪಗಳೂ ಮಿನಿಸ್ತೂಪದ ತುಣುಕುಗಳೂ ಮಿಥುನ ಶಿಲ್ಪಗಳೂ ತುಂಬಾ ಗಮನಾರ್ಹವಾದವು. ಇಲ್ಲಿ ತಾಮ್ರ ಪಾತ್ರೆಗಳು ಮತ್ತು ಕುಂಭಾವಶೇಷಗಳೂ ದೊರೆತಿವೆ. 

	ಇಲ್ಲಿಯ ಅತ್ಯಂತ ಪ್ರಸಿದ್ಧವಾದ ಶಿಲ್ಪವೆಂದರೆ ಸುಂದರ ಯಕ್ಷನದು. ಸುಮಾರು 1,07 ಮೀ. ಎತ್ತರವಿರುವ ಈ ಶಿಲ್ಪದ ಮೊಣಕಾಲಿನಿಂದ ಮೇಲ್ಭಾಗ ಮಾತ್ರ-ಎಡ ಮುಂದೋಳನ್ನು ಬಿಟ್ಟು-ಉಳಿದು ಬಂದಿದೆ. ಸ್ತೂಲ ಮಾಂಸಲ ಕಾಯದ ಯಕ್ಷ ತಲೆಯ ಮೇಲೆ ತಟ್ಟೆಯಾದ ಬೋಗುಣಿಯಂಥ ಪಾತ್ರೆಯೊಂದನ್ನು ಎರಡೂ ಕೈಗಳಿಂದ ಹಿಡಿದುಕೊಂಡಿದ್ದಾನೆ ; ಹಣೆಯ ಮೇಲ್ಭಾಗದಲ್ಲಿ ಗುಂಗುರು ಕೂದಲು ಸಾಲು : ಕಿವಿಗೆ ಶಂಕು ಕುಂಡಲಗಳು ; ಕೊರಳಲ್ಲಿ ಮಣಿಮಾಲೆ ; ತೋಳುಗಳಿಗೆ ಕೇಯೂರ ; ಅಗಲವಾಗಿ ತೆರೆದ ಕಣ್ಣು. ಆನಂದದಿಂದ ಹೊಮ್ಮಿದ ತುಂಬು ನಗೆಯ ಮುಖ. ಸ್ತೂಲವಾದರೂ ಮನೋಹರವಾದ ಈ ಶಿಲ್ಪ ಒಂದು ಮಾದರಿ ಶಿಲ್ಪವಾಗಿ ಆ ಕಾಲದ ಶಿಲ್ಪಗಳಲ್ಲೇ ಅತ್ಯುತ್ತಮವಾದ್ದೆನಿಸಿದೆ. ಕಣ್ಣದಾಸನೆಂಬ ಹಿರಣ್ಯಕಾರ ಇದನ್ನು ಕಡೆದನೆಂಬುದು (ಕಣ್ಣದಾಸೇನ ಹಿರಂನಕಾರೇನ ಕತಾ) ಈ ಶಿಲ್ಪದ ಮೇಲಿರುವ ಶಾಸನದಿಂದ (ಕ್ರಿ.ಪೂ. 2 ನೇ ಶತಮಾನ) ತಿಳಿದುಬರುತ್ತದೆ.
(ಎಚ್.ಎಂ.ಎನ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ